ಚೋಮನ ದುಡಿ ಒಂದು ಕನ್ನಡ ಚಲನಚಿತ್ರ. ಇದು ಶಿವರಾಮ ಕಾರಂತರು ಬರೆದ ಅದೇ ಹೆಸರಿನ ಕಾದಂಬರಿ ಆಧಾರಿತವಾಗಿದ್ದು ಸಾಮಾಜಿಕ ಕಥಾವಸ್ತುವನ್ನೊಳಗೊಂಡಿದೆ. ಈ ಚಲನಚಿತ್ರವು ೧೯೭೫ರಲ್ಲಿ ಬಿಡುಗಡೆಯಾಯಿತು. ಇದು ಸ್ವರ್ಣಕಮಲ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.[೧][೨]. ಈ ಸಿನೆಮಾದ ನಿರ್ದೇಶಕರು ಬಿ.ವಿ.ಕಾರಂತ. ಆಗಿನ ಕಾಲದ ಸಾಮಾಜಿಕ ಸ್ಥಿತಿಗತಿ, ಜಾತಿವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದ ಜನರ ಹತಾಶೆ, ಅಸಹಾಯಕತೆ, ಬಡತನ, ದುರ್ಭರ ಬದುಕನ್ನು ಈ ಚಲನಚಿತ್ರವು ಬಿಂಬಿಸುತ್ತದೆ.
ಕಥಾಹಂದರ
ಚೋಮ ಎಂಬ ಅಸ್ಪೃಶ್ಯ ಕೆಳಜಾತಿಯ ಮನುಷ್ಯ ಒಂದು ಹಳ್ಳಿಯಲ್ಲಿ ಜಮೀನ್ದಾರನೊಬ್ಬನ ಬಳಿ ಜೀತದಾಳಾಗಿ ಕೆಲಸ ಮಾಡುತ್ತಿರುತ್ತಾನೆ. ಅವನಿಗೆ ತನ್ನ ಜಮೀನನ್ನು ಉಳುವ, ಬೇಸಾಯ ಮಾಡುವ ಉತ್ಕಟ ಆಸೆ ಇದ್ದರೂ ಸಹ ಅವನ ಸಾಮಾಜಿಕ ಸ್ಥಾನದ ಕಾರಣದಿಂದಾಗಿ ಉಳುಮೆ ಮಾಡಲು ಸಾಧ್ಯವಾಗಿರುವುದಿಲ್ಲ. ಕಾಡಿನಲ್ಲಿ ಸಿಕ್ಕಿದ ಎರಡು ಎತ್ತುಗಳನ್ನು ಅವನು ಸಾಕಿಕೊಂಡಿರುತ್ತಾನೆ. ಆದರೆ ಅವುಗಳನ್ನ ಉಳುಮೆಗೆ ಬಳಸಿಕೊಳ್ಳಲಾಗುತ್ತಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಕ್ರಿಶ್ಚಿಯನ್ ಧರ್ಮಪ್ರಚಾರಕರು ಚೋಮನನ್ನು ಜಮೀನು ಉಳುಮೆಯ ಆಮಿಷ ತೋರಿಸಿ ಮತಾಂತರಗೊಳಿಸಲು ನೋಡುತ್ತಾರೆ. ಆದರೆ ಚೋಮ ತನ್ನ ನಂಬಿಕೆಯನ್ನು ಬಿಟ್ಟು ಮತಾಂತರಗೊಳ್ಳಲು ಒಪ್ಪುವುದಿಲ್ಲ. ಅವನು ದುಡಿ ಬಡಿಯುವ ಮೂಲಕ ತನ್ನ ಹಣೆಬರಹದ ಸಿಟ್ಟಿನ ಹತಾಶೆಯನ್ನು ಹೊರಹಾಕುತ್ತಾನೆ.
ಅವನಿಗೆ ನಾಲ್ಕು ಗಂಡು ಹಾಗೂ ಒಂದು ಹೆಣ್ಣು ಮಕ್ಕಳು. ಇಬ್ಬರು ಹಿರಿಯ ಗಂಡುಮಕ್ಕಳು ದೂರದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಾ ಸಾಲವನ್ನು ತೀರಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಒಬ್ಬ ಮಗ ಕಾಲರಾ ರೋಗಕ್ಕೆ ಬಲಿಯಾಗಿ ಸಾವಿಗೀಡಾಗುತ್ತಾನೆ. ಮತ್ತೊಬ್ಬ ಮಗ ಕ್ರೈಸ್ತ ಹುಡುಗಿಯನ್ನು ಮದುವೆಯಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಾನೆ. ಮಗಳು ’ಬೆಳ್ಳಿ’ ಒಂದು ತೋಟದಲ್ಲಿ ಕೆಲಸ ಮಾಡುತ್ತಾ ತೋಟದ ಮಾಲೀಕ ರೈಟರ್ ಮನ್ವೇಲನ ಬಲೆಗೆ ಬೀಳುತ್ತಾಳೆ. ಅವಳನ್ನು ತೋಟಕ ಮಾಲೀಕ ಅತ್ಯಾಚಾರ ಮಾಡಿ ಚೋಮನ ಸಾಲವನ್ನು ಮನ್ನಾ ಮಾಡುತ್ತಾನೆ. ಅವಳು ಮನೆಗೆ ಹಿಂದಿರುಗಿ ಈ ವಿಷಯವನ್ನು ಚೋಮನಿಗೆ ಹೇಳುತ್ತಾಳೆ. ಚೋಮನ ಕಿರಿಯ ಮಗ ನದಿಯಲ್ಲಿ ಮುಳುಗಿ ಸಾಯುತ್ತಾನೆ. ಅವನು ಅಸ್ಪೃಶ್ಯ ಜಾತಿಯ ಕಾರಣ ಆತ ಮುಳುಗುವ ಸಮಯದಲ್ಲಿ ಯಾರೂ ಸಹ ಅವನನ್ನು ಉಳಿಸಲು ಹೋಗದೇ ಮುಳುಗಿಹೋಗುತ್ತಾನೆ. ಚೋಮ ತನ್ನ ಮಗಳು ಮನ್ವೆಲಾನ ಜೊತೆ ರತಿಯಾಟದಲ್ಲಿ ತೊಡಗಿದ್ದನ್ನು ನೋಡುತ್ತಾನೆ. ಕೋಪದಿಂದ ಅವಳನ್ನು ಹೊಡೆದು ಮನೆಯಿಂದ ಹೊರಹಾಕುತ್ತಾನೆ. ತನ್ನ ವಿಧಿಯನ್ನು ಮೆಟ್ಟಿನಿಂತು ಎದುರಿಸುವ ಸಲುವಾಗಿ ಅವನು ತಾನೇ ತನ್ನ ಚೂರು ಜಮೀನನ್ನು ಉಳುತ್ತಾನೆ. ಎತ್ತುಗಳನ್ನು ಕಾಡಿಗಟ್ಟುತ್ತಾನೆ. ಸಿನೆಮಾ ಕೊನೆಯಲ್ಲಿ ಚೋಮ ಮನೆಯೊಳಗೆ ಕೂತು ಬಾಗಿಲುಹಾಕಿಕೊಂಡು ದುಡಿಯನ್ನು ಬಡಿಯುತ್ತಾ ಕೊನೆಯುಸಿರೆಳೆಯುತ್ತಾನೆ.